new tab editing

SCROLING TEXT

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ.PREVENTION IS BETTER THAN CURE . Attention : Get resources from menu-> Science > Pariksha kirana-22-23> .

Friday, August 14, 2020

ಆಹಾ ! ಗುಲಗಂಜಿ ಎಂಬ ವಿಷಕನ್ಯೆ !!

 

ಆಹಾ ! ಗುಲಗಂಜಿ ಎಂಬ ವಿಷಕನ್ಯೆ !!

2018 ರ ಬಿ.ಜಿ.ಎಲ್ ಸ್ವಾಮಿಯವರ ಜನ್ಮ ಶತಮಾನೋತ್ಸವದ 

ಸಂದರ್ಭದಲ್ಲಿ , ಆದಿ ಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ಶಿಕ್ಷಕರ ತರಬೇತಿಯ ನೆನೆಪುಗಳನ್ನು ಮೆಲುಕು ಹಾಕುತ್ತಾ ಬರೆದ ಲೇಖನ


ಕನ್ನಡದ ಬಾವುಟವನ್ನು ಮುಗಿಲೆತ್ತರಕ್ಕೆ ಒಯ್ದ ಕನ್ನಡದ ಕಸ್ತೂರಿ ಕಂಪನ್ನು ಜಗದಗಲಕೆ ಪಸರಿಸಿದ ಭಾರತದ ಹೆಮ್ಮೆಯ ಸಸ್ಯಶಾಸ್ತಜ್ಞ ಡಾ: ಬಿ.ಜಿ.ಎಲ್ ಸ್ವಾಮಿಯವರು ತಮ್ಮ ಜೀವಿತಾವಧಿಯನ್ನು ಹಸಿರುಹೊನ್ನಿನ ಅಧ್ಯಯನದಲ್ಲಿ ತೊಡಗಿಸಿಕೊಂಡು ಪಂಡಿತರಿಗೋಸ್ಕರ ಮಾತ್ರವೇ ಎನ್ನಬಹುದಾದ ಸಸ್ಯಶಾಸ್ತçವನ್ನು ಉಲ್ಲಾಸದಾಯಕವಾಗಿಸಿ ಪಾಮರರೆಡೆಗೆ ಒಯ್ದು ಸಾಹಿತ್ಯಕ್ಕೆ ಹೊಸಭಾಷ್ಯವನ್ನು ಬರೆದರು. ಸಾಕ್ಷಾತ್ಕಾರದ ಹಾದಿಯನ್ನು ಹಾಕಿಕೊಟ್ಟ ಇಂತಹ ಸಾಹಿತಿವಿಜ್ಞಾನಿಯ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಕಿರು ಲೇಖನದ ಮೂಲಕ ಬಿ.ಜಿ.ಎಲ್ ಸ್ವಾಮಿಯವರ ಚರಣಗಳಿಗೆ ನುಡಿನಮನಗಳನ್ನು ಸಲ್ಲಿಸುತ್ತಿದ್ದೇನೆ.


 

ಕಾಲಭೈರವೇಶ್ವರ ಸ್ವಾಮಿಯ ನೆಲೆವೀಡಾದ ಆದಿಚುಂಚನಗಿರಿಯ ಹಸಿರು ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಹಸಿರು ಹೊದ್ದ ಭೂರಮೆಯ ಸೌಂದರ‍್ಯವನ್ನು ಮಳೆಯ ತುಂತುರು ಇಮ್ಮಡಿಸಿತ್ತು. ಮೂಡಣದಲ್ಲಿ ಅರುಣನೆದ್ದು ಬೆಳ್ಳನೆಯ ಬೆಳಗನ್ನು ಚೆಲ್ಲುವ ಹೊತ್ತನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಇಂತಿಪ್ಪ ಇಳೆಯ ಮಡಿಲಿಗೆ ಮಳೆಯೊಡನೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಿಜ್ಞಾನ ಸಂಪನ್ಮೂಲ ಶಿಕ್ಷಕರು ಹೆಚ್ಚಿನ ತರಬೇತಿಗಾಗಿ ಆಗಮಿಸಿದ್ದರು. ರಾಜ್ಯಮಟ್ಟದ ಈ ತರಬೇತಿಯನ್ನು ಹೆಚ್ಚು ಅರ್ಥಪೂರ್ಣಗೊಳಿಸುವ ಹಾಗೂ ಆಕರ್ಷಣೀಯ ವಾಗಿಸುವ ಉದ್ದೇಶದಿಂದ ನಾವು ವೈವಿಧ್ಯಮಯ ಚಟುವಟಿಕೆಗಳನ್ನು ರೂಪಿಸಿಕೊಂಡಿದ್ದೆವು. ಅವುಗಳಲ್ಲಿ ಸ್ಥಳೀಯ ಪರಿಸರದ ಅಧ್ಯಯನವನ್ನೂ ಸೇರಿಸಿದ್ದೆವು.

ಸ್ಥಳೀಯ ಸಸ್ಯಪ್ರಬೇಧಗಳ ಅಧ್ಯಯನ, ಹೆಜ್ಜೆ ಗುರುತಿನ ಮೂಲಕ ಪ್ರಾಣಿಗಳನ್ನು ಗುರುತಿಸುವುದು, ಕೀಟಗಳ ಅಧ್ಯಯನ ಮೊದಲಾದವನ್ನೊಳಗೊಂಡ ಪರಿಸರ ಅಧ್ಯಯನವು ಜೀವಿಗಳ ನಡುವಣ ಪರಸ್ಪರಾವಲಂಬನೆಯ ಜೊತೆಗೆ ನಿಸರ್ಗದೊಡಲ ಸಂಕೀರ್ಣತೆಯನ್ನು ಅನಾವರಣಗೊಳಿಸುತ್ತದೆ.

ಅರುಣನ ಆಗಮನಕ್ಕೂ ಮೊದಲೇ ತುಂತುರು ಸೋನೆಮಳೆಯಲ್ಲಿ ಆರುಗಂಟೆಗೇ ಸಾಕಷ್ಟು ಸಂಖ್ಯೆಯಲ್ಲಿ ಆಸಕ್ತ ಶಿಕ್ಷಕರು ಬೆಟ್ಟದ ಮೇಲೆ ನಮ್ಮ ನಿರೀಕ್ಷೆಯಲ್ಲಿದ್ದರು. ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಸ್ಯ ಪ್ರಬೇಧಗಳನ್ನು ಗುರುತಿಸಲು ಸಹಾಯ ನೀಡುವ ಮೊಬೈಲ್ ಆ್ಯಪ್ ಬಗ್ಗೆ ತಿಳಿಸುತ್ತಾ ವೈಜ್ಞಾನಿಕ ಹೆಸರುಗಳಿಂದ ಸಸ್ಯಗಳನ್ನು ಗುರುತಿಸುತ್ತಾ ಚರ್ಚಿಸುತ್ತಾ ಸಾಗಿದೆವು. ಬಂಡೆ ಏರಿ ತಗ್ಗು ಇಳಿದು ಜೀವವೈವಿಧ್ಯವನ್ನು ಅರಿಯುತ್ತಾ ಮುಂದುವರೆದೆವು.

ಇದ್ದಕ್ಕಿದ್ದಂತೆ ಬಂಡೆಯೊಂದರ ಹಿಂದಿನಿಂದ ಸುಂದರವಾದ ಆಕರ್ಷಕ ಕೆನ್ನೆತ್ತರ ಬಣ್ಣದ ಬೀಜಗಳು ನನ್ನನ್ನು ಕೈಬೀಸಿ ಕರೆದಂತಾಯ್ತು. ಸಸ್ಯಸಂಕುಲ ವೃದ್ಧಿಗೆ ನಿಸರ್ಗದೊಡನೆಯ ಬೇಟದ ಅನಾವರಣ .

ಬಂಡೆ ಏರಿ ನಿಧಾನವಾಗಿ ಅವಲೋಕಿಸಿದರೆ ಬಳ್ಳಿಯೊಂದು ಆಕರ್ಷಕ ಬೀಜಗಳ ಮೂಲಕ ತನ್ನ ಸೌಂದರ್ಯ ಅಸ್ವಾದನೆಗೆ ಕೈಬೀಸಿ ಕರೆದಂತಾಯಿತು .ಅಷ್ಟರಲ್ಲಿ ಬಂಡೆ ಏರಿದ ವಿಜಯಪುರದ ಕೆಲ ಸ್ನೇಹಿತರು ಭಟ್ರೇ ಇದು ಗುಲಗಂಜಿ ಇದರ ಎಲೆಗಳನ್ನು ತಿನ್ನಿ ಎನ್ನುತ್ತಾ ಎಲೆಗಳನ್ನು ತಾವು ಸವಿಯುತ್ತಾ ನನಗೆ ಕೆಲವು ಎಲೆಗಳನ್ನು ನೀಡಿದರು. ಮೊದಲಿಗೆ ಸ್ವಲ್ಪ ಒಗರೆನಿಸಿತು. ನಂತರ ನಿಧಾನಕ್ಕೆ ಎಲೆಗಳು ಅತಿ ಸಿಹಿಯ ರುಚಿಯನ್ನು ನೀಡಿದವು. ಅರ್ಧತಾಸು ಕಳೆದರೂ ಸಿಹಿಯ ರುಚಿ ಹಾಗೇ ಇತ್ತು. ಆದ್ಭುತ ಎನಿಸಿದ ಈ ಸಕ್ಕರೆಯ ಎಲೆಗಳು ನಮ್ಮೆಲ್ಲರಿಗೂ ಅಚ್ಚರಿಯನ್ನು ಉಂಟುಮಾಡಿದವು. ಸ್ಟೀವಿಯ ಎಲೆಗಳ ಸಿಹಿ ಹಾಗೂ ನೆಲ್ಲಿಕಾಯಿ ತಿಂದು ನೀರುಕುಡಿದಾಗ ಆಗುವ ಅನುಭವವನ್ನು ನೆನಪಿಗೆ ತಂದಿತು. ಆಗ ಪಾಟೀಲರು ನೀವು ಈಗ ನೀರು ಕುಡಿದರೆ ಸಿಹಿಯ ಅನುಭವ ಇನ್ನೂ ಹೆಚ್ಚಾಗುತ್ತದೆ ಎಂದರು. ಇನ್ನೊಬ್ಬ ಸ್ನೇಹಿತರು, ನಮ್ಮಲ್ಲಿ ಇವುಗಳನ್ನು ಸ್ವೀಟ್ ಪಾನ್‌ಬೀಡಾದಲ್ಲಿ ಬಳಸುತ್ತಾರೆ ಎನ್ನುವ ಮಾಹಿತಿ ಒದಗಿಸಿದರು.


ಇದು ಗುಲಗಂಜಿ ಎಂದಾಗ ಮತ್ತಷ್ಟು ಅಚ್ಚರಿಯಾಯಿತು. ದಕ್ಷಿಣ ಕನ್ನಡ , ಕೊಡಗು, ಕಾಸರಗೋಡು ಪರಿಸರದಲ್ಲಿ ಹೇರಳವಾಗಿರುವ ಮಂಜೊಟ್ಟಿ ಎಂದು ಕರೆಯಲಾಗುವ ದೊಡ್ಡ ಗುಲಗಂಜಿ ಅಥವಾ ರೆಡ್ ಸ್ಯಾಂಡಲ್ ಅಥವಾ ಆನೆ ಗುಲಗಂಜಿ ಎಂದು ಕರೆಯಲಾಗುವ ಸಸ್ಯವನ್ನೇ ಗುಲಗಂಜಿ ಎಂದು ಇಲ್ಲಿಯವರೆಗೂ ನಾನು ಭಾವಿಸಿದ್ದೆ.


Adenanthera povinina  ಎಂಬ ಹೆಸರಿನಿಂದ ಕರೆಯುವ ಮಂಜೊಟ್ಟಿ ಬಹುವಾರ್ಷಿಕ ದ್ವಿದಳ ಸಸ್ಯವಾಗಿದ್ದು ಇದರ ಬೀಜಗಳನ್ನು ಸಾಮಾನ್ಯವಾಗಿ ಚನ್ನಮಣೆ ಅಥವಾ ಅಳಗುಳಿಮನೆ ಆಟದಲ್ಲಿ ಬಳಸುತ್ತಾರೆ. ಮಂಜೊಟ್ಟಿಯಲ್ಲಿ ಅನೇಕ ಔಷಧೀಯ ರಾಸಾಯನಿಕಗಳಿದ್ದು, ಇವು ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿವೆ. ಕೇರಳದಲ್ಲಿ ಮಂಜೊಟ್ಟಿ ಕೃಷಿ ಲಾಭದಾಯಕ ಕೃಷಿ ಉದ್ಯಮವಾಗಿ ಬೆಳೆಯುತ್ತಿದೆ. ಮರಮಟ್ಟುಗಳು ಬಹು ಉಪಯೋಗಿ. ಕೆನ್ನೆತ್ತರ ಬಣ್ಣದ ಬೀಜಗಳು ಆಭರಣ ತಯಾರಿಕೆಯಲ್ಲಿ ಅಳತೆ ಮಾನಗಳಾಗಿ ಉಪಯೋಗಿಸಲ್ಪಟ್ಟಿವೆ. ಹಾಗೆಯೇ ತಾಳವಾದ್ಯಗಳಲ್ಲೂ ಬೀಜಗಳನ್ನು ಬಳಸುತ್ತಾರೆ.







ಅಪೂರ್ವ ಸೌಂದರ್ಯದೊಂದಿಗೆ ಆಧಾರ ಗಿಡದ ನಡುವಿನಿಂದ ಲಾಸ್ಯವಾಡುತ್ತಿದ್ದ ಗುಲಗಂಜಿ ಬಳ್ಳಿಯ ಹಿಂದೆ ಪತ್ತೆದಾರಿಕೆ ಮಾಡಲು ಹೊರಟಾಗ ನನಗೆ ಅನೇಕ ಅಪೂರ್ವ ಮಾಹಿತಿಗಳು ದೊರೆತವು.

ಅಬ್ರಸ್ ಪ್ರಿಕಟೋರಿಯಸ್ (Abrus precatorius ) ಎಂದು ವೈಜ್ಞಾನಿಕವಾಗಿ ಗುರುತಿಸಲ್ಪಡುವ ಪಾಶ್ಚಾತ್ಯ ದೇಶಗಳಲ್ಲೂ ಕಂಡುಬರುವ ಇದು ಭಾರತೀಯ ಮೂಲದ ಸಸ್ಯವಾಗಿದೆ. ಗುಲಗಂಜಿ ಸಸ್ಯ ಸಾಮ್ರಾಜ್ಯದ ಆವೃತಬೀಜಸಸ್ಯ ವರ್ಗದ ಫೆಬೇಸಿ ಎಂಬ ಕುಟುಂಬಕ್ಕೆ ಸೇರಿದೆ. ಚೂಡಾಮಣಿ, ಶಿಖಂಡಿಕಾ, ಚಕ್ರಶಲ್ಯ, ಶ್ವೇತ ಕಾಂಭೋಜಿ ಮೊದಲಾದ ಸಂಸ್ಕೃತನಾಮಗಳಿಂದ ಕರೆಲ್ಪಡುವ ಗುಲಗಂಜಿಯಲ್ಲಿ ಪ್ರಮುಖವಾಗಿ ಬಿಳಿ ಹಾಗೂ ಕೆಂಪು ಬಣ್ಣದ ಬೀಜಗಳನ್ನು ಉತ್ಪಾದಿಸುವ 2 ವಿಧಗಳಿವೆ. ಬಳ್ಳಿಯಲ್ಲಿ 10 ಸೆ,ಮೀ ಉದ್ದದ ಪ್ರತಿಯೊಂದು ಸಂಯುಕ್ತಪತ್ರದಲ್ಲಿ 12-20 ಜೊತೆ ಕಿರು ಎಲೆಗಳನ್ನು ನೋಡಬಹುದು. ಕೆಂಪು ಗುಲಗಂಜಿಯಲ್ಲಿ ಪಾಡ್ ಎನ್ನಲಾಗುವ ಕಾಯಿಯಲ್ಲಿ 3-6 ರಕ್ತವರ್ಣದ ಬೀಜಗಳನ್ನು ನೋಡಬಹುದು. ಬೀಜಗಳ ತೂಕವು ಹೆಚ್ಚು ಕಡಿಮೆ ಒಂದೇ ರೀತಿ ಇದ್ದು ಒಂದು ರತ್ತಿ (ratti) ಅಂದರೆ ಸುಮಾರು 125 ಮಿ.ಗ್ರಾಮ್ ನಷ್ಟು ತೂಗುತ್ತದೆ. 

ಅಚ್ಚರಿ ಎಂದರೆ ನಿಸರ್ಗ ಅದೆಷ್ಟು ನಿಖರತೆಯನ್ನು ಹೊಂದಿದೆ ಎನ್ನಲು ಬೀಜಗಳ ಏಕರೂಪದ ತೂಕವೇ ಸಾಕ್ಷಿ. ಆದ್ದರಿಂದಲೇ ಭಾರತೀಯರು ಗುಲಗಂಜಿಯನ್ನು ಬಂಗಾರದಂತಹ ಅಮೂಲ್ಯ ವಸ್ತುಗಳನ್ನು ತೂಕಹಾಕಲು ಬಳಸುತ್ತಿದ್ದರು. ಎಂಟು ರತ್ತಿಗಳು ಸೇರಿ ಒಂದು ಮಾಷ, 12 ಮಾಷಗಳು ಸೇರಿದರೆ ಒಂದು ತೊಲವಾಗುತ್ತದೆ. ತೊಲ ಎಂದರೆ ಸುಮಾರು 11.6 ಗ್ರಾಮ್‌ಗಳಿಗೆ ಸಮ.

ಪುರಾಣ ಕಾಲದಿಂದಲೂ ಜನಪದಗಳಲ್ಲಿ ಬೆರೆತು ಹೋದ ಗುಲಗಂಜಿ ಐತಿಹಾಸಿಕ, ಸಾಮಾಜಿಕ, ಸಾಂಸೃತಿಕ ಪರಂಪರೆಯ ಪ್ರತೀಕವಾಗಿದ್ದು ಕೆಲವೊಮ್ಮೆ ಖಳನಾಯಕನ ಅವತಾರದಲ್ಲೂ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.

ಏಡಿಯ ಕಣ್ಣು , ಪ್ರಾರ್ಥನಾಮಣಿ , ಗುಂಜಿ ಮೊದಲಾದ ಹಲವಾರು ಹೆಸರುಗಳಿಂದ ಪರಿಚಿತವಾದ ಗುಲಗಂಜಿಯ ಕುರಿತು ಅನೇಕ ಐತಿಹ್ಯಗಳಿವೆ.

ಗುಲಗಂಜಿಯ ಆಕರ್ಷಕ ರಕ್ತವರ್ಣದ ಹೊಳಪು 30 ವರ್ಷಗಳವರೆಗೂ ಮಾಸದೇ ಉಳಿಯುವುದರಿಂದ ಇದರಿಂದ ತಯಾರಿಸಲಾದ ಆಭರಣಗಳು ಹೆಂಗಳೆಯರ ಮನಸೂರೆಗೊಂಡಿದ್ದವು. ಈ ಆಭರಣಗಳನ್ನು ಧರಿಸುವುದೂ ಪ್ರತಿಷ್ಟೆಯಾಗಿತ್ತು.

19ನೇ ಶತಮಾನದಲ್ಲಿ ಇಂಗ್ಲೆಂಡ್‌ನ ಕುಲೀನ ಸ್ತ್ರೀಯರಲ್ಲಿ ಇದ್ದಕ್ಕಿದ್ದಂತೆ ರೋಗವೊಂದು ಕಾಣಿಸಿಕೊಂಡಿತು.ಇದ್ದಕ್ಕಿದ್ದಂತೆ ಹೊಟ್ಟೆನೋವು, ವಾಂತಿ - ಬೇಧಿ, ನಿಶ್ಯಕ್ತಿಗಳಿಂದ ಬಳಲರಾಂಭಿಸಿದರು. ಇದಕ್ಕೆ ಕಾರಣ ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿತ್ತು. ಕೂಲಂಕುಶ ಅಧ್ಯಯನದ ನಂತರ ಗುಲಗಂಜಿಯ ಆಭರಣ ಧರಿಸುತ್ತಿದ್ದ ಸ್ತ್ರೀಯರಲ್ಲಿ ಮಾತ್ರ ಈ ಲಕ್ಷಣಗಳು ಸಾಮಾನ್ಯವಾಗಿರುವುದು ಕಂಡುಬಂತು. ಈ ಸ್ತ್ರೀರು ಆಭರಣದಲ್ಲಿದ್ದ ಗುಲಗಂಜಿ ಬೀಜಗಳನ್ನು ಚೀಪುವ ಅಭ್ಯಾಸವನ್ನು ಹೊಂದಿದ್ದರು. ಗುಲಗಂಜಿಯ ಕಾರ್ಕೋಟಕ ವಿಷವಾದ ಅಬ್ರಿನ್ ಎಂಬ ರಾಸಾಯನಿಕವೇ ಇದಕ್ಕೆ ಪ್ರಮುಖ ಕಾರಣ ಎಂದು ಕಂಡುಕೊಂಡ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ನಾರಿಯರನ್ನು ವಿಚಿತ್ರ ರೋಗಲಕ್ಷಣಗಳಿಂದ ಮುಕ್ತಗೊಳಿಸಿದರು.

            1881ರ ಬ್ರಿಟಿಷ್ ಬಂಗಾಳದ ಜಿಲ್ಲಾ ಪೋಲಿಸ್ ಅಧೀಕ್ಷಕರ ವರದಿಯ ಪ್ರಕಾರ ಇದನ್ನು ಆಯುಧಗಳಲ್ಲಿ ಬಳಸುತ್ತಿರುವುದು ತಿಳಿದು ಬರುತ್ತದೆ. ಬುಡಕಟ್ಟು ಜನರು ಗುಲಗಂಜಿಯ ಬೀಜಗಳಿಂದ ತಯಾರಿಸಿದ ಲೇಪನವನ್ನು ಆಯುಧಗಳಿಗೆ ಸವರಿ ಒಣಗಿಸಿ ಅವುಗಳನ್ನು ಬೇಟೆಯಾಡಲು ಬಳಸುತ್ತಿದ್ದರೆಂಬುವುದು ಇತಿಹಾಸದ ದಾಖಲೆಗಳಿಂದ ತಿಳಿಯುತ್ತದೆ. ಈ ವಿಷವನ್ನು ಬಳಸಿ ತಮ್ಮ ಹುಲ್ಲುಗಾವಲುಗಳಿಗೆ ನುಗ್ಗಿದ ವಿರೋಧಿಗಳ ಪಶುಗಳನ್ನು ಸಾಯಿಸುತ್ತಿದ್ದರಂತೆ. ಅದೇರೀತಿ ವಿರೋಧಿಗಳ ಜೀವಹರಣಕ್ಕೂ ಬಳಸುತ್ತಿದ್ದರಂತೆ.

ಗುಲಗಂಜಿಯಲ್ಲಿ ಅನೇಕ ಅತ್ಯಮೂಲ್ಯ ಅಲ್ಕಲೈಡ್‌ಗಳಿರುವುದರಿಂದ ಅದು ಔಷಧಿಗಳ ಗಣಿಯಾಗಿದೆ.  ಅಬ್ರಿನ್, ಅಬ್ರಿಕ್ ಆಮ್ಲ ,ಪ್ರಿಕೋಲ್ , ಅಬ್ರೋಲ್, ಅಬ್ರಸೀನ್, ಪ್ರಿಕಸೀನ್ , ಅಬ್ರಸ್ ಲ್ಯಾಕ್ಟೋನ್ , ಟ್ರಿಪ್ಟೋಫ್ಯಾನ್, ಹೆಡೆರಾಜೆನಿನ್ ಮೊದಲಾದ ಅನೇಕ ರಾಸಾಯನಿಕಗಳಿದ್ದು ಹತ್ತು ಹಲವು ರೋಗಗಳಲ್ಲಿ ಔಷಧಿಯಾಗಿ ಬಳಸಲ್ಪಡುತ್ತಿದೆ. ಸಂತಾನ ನಿಯಂತ್ರಣ, ಸಂಧಿವಾತ, ಜ್ವರ , ಚರ್ಮರೋಗ, ಮಾನಸಿಕ ಕಾಯಿಲೆಗಳು, ಅಲ್ಸರ್, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ನೆಗಡಿ ಹೀಗೆ ಅನೇಕ ಸಮಸ್ಯೆಗಳಿಗೆ ಗುಲಗಂಜಿಯ ಬೇರು, ಬೀಜ , ಎಲೆಗಳು ರಾಮಬಾಣವಾಗಿವೆ.

 ಅತಿಯಾದರೆ ಅಮೃತವೂ ವಿಷ ಎಂದ ಮೇಲೆ ಗುಲಗಂಜಿ ಇದರಿಂದ ಹೇಗೆ ಹೊರತಾದೀತು? ಹೀಗೆ ಕೆಲವೊಮ್ಮೆ ಹೀರೋ ಆಗಿ ಇನ್ನು ಕೆಲವು ಸಲ ವಿಲನ್ ಆಗಿ ಮೆರೆಯುತ್ತಿರುವ ಗುಲಗಂಜಿಯ ಮಹಿಮೆ ಅಪಾರವಾದದ್ದು. ಹಾಗಾಗಿ ಬಳುಕುವ ಕನ್ಯೆ ಗುಲಗಂಜಿಯ ಬಗ್ಗೆ ಎಚ್ಚರವಿರಲಿ.





28 comments:

  1. ಉತ್ತಮ ಮಾಹಿತಿಯ ಲೇಖನ ಸರ್..👍👏🙏👌

    ReplyDelete
  2. ಉಪಯುಕ್ತವಾದ ಲೇಖನ ಸರ್

    ReplyDelete
  3. This comment has been removed by the author.

    ReplyDelete
  4. ಗುಲಗಂಜಿ ಬಳ್ಳಿ ನಮ್ಮ‌ಮನೆಯಲ್ಲಿತ್ತುಆದರೆ ರುಚಿ‌ನೋಡಿರಲಿಲ್ಲ
    ಕಾಯಿಗಳ ಅಂದಕ್ಕೆ ಕಾಯಿಗಳನ್ನು ಸಂಗ್ರಹಿಸಿ ಆಟದಲ್ಲಿ ಬಳಸುತ್ತಿದ್ದೆವು,ಬಹಳ ವಿಷಯಗಳಿವೆ ಲೇಖನದಲ್ಲಿ
    ಅದು ವಿಷ ಅಂತ ಹೇಳ್ತಿದ್ದರು ಹಿರಿಯರು

    ReplyDelete
    Replies
    1. ಹೌದು ಕಾಯಿಗಳು ವಿಷ ಅಂತ ಗೊತ್ತಿತ್ತು ಆದರೆ ಎಲೆಗಳು ಅಷ್ಟೊಂದು ಸಿಹಿ ಅಂತ ಗೊತ್ತಿರಲಿಲ್ಲ ನಿಸರ್ಗ ನಮಗೆ ಏನೇನು ಕಲಿಸುತ್ತದೆ ಅದ್ಭುತ ಅಲ್ವಾ

      Delete
  5. ನಮ್ಮ‌ಮನೆಯಲ್ಲಿ ಈ ಬಳ್ಳಿ ಇತ್ತು ,ಕಾಯಿ ಸಂಗ್ರಹಿಸಿ ಆಟ ಆಡ್ತಿದ್ದೆವು,ಈ ವಿಶೇಷತೆ ಇದೆ ಎಂದು ತಿಳಿದಿರಲಿಲ್ಲ

    ReplyDelete
  6. Very usefull article.. It's beautiful seed.. But poison it's matter...

    ReplyDelete
  7. Raghavendramaiah@gmail.com

    Super Bhat

    ReplyDelete
  8. Replies
    1. ಥ್ಯಾಂಕ್ಯೂ ವೆರಿ ಮಚ್ ಸರ್

      Delete
  9. ರಾಂಚಂಭಟ್, excellent..!!.
    Google & youtube ಕಾಲಮಾನದಲ್ಲಿ ಬರವಣಿಗೆಯಲ್ಲಿ ವಿಚ್ಣಾನದಂತಹ ವಿಚಾರವನ್ನು ಓದಿಸಿಕೊಂಡು ಹೋಗುವಂತೆ ನೆಟ್ಟಿಗರನ್ನು ಕಟ್ಟಿಹಾಕುವುದು ಸಾಹಸದ ಕೆಲಸವೇ.. ನಿನ್ನ ಲೇಖನ ಈ ವಿಷ್ಯಯದಲ್ಲಿ ಯಶಸ್ವಿಯಾಗಿದೆ. ಈ ಎಲೆಗಳನ್ನು ಬೀಡಾದಲ್ಲಿ ಬಳಸುವುದು ಬೀಡದಂಗಡಿಯಲ್ಲಿ ಒಣಗಿದ ಆ ಎಲೆಗಳು ನೆನಪಿಗೆ ತಂದವು.. ಇವು ಅವೇ ಎಂದುಕೊಳ್ಳುತ್ತೇನೆ.. ಒಟ್ಟಿನಲ್ಲಿ ಅಪೂರ್ವ ಮಾಹಿತಿಗಳನ್ನು ಒದಗಿಸಿದ ಬಿಗಿಯಾದ ಲೇಖನ..

    ReplyDelete
    Replies
    1. ಸಹೃದಯ ಓದುಗರು ಇದ್ದಲ್ಲಿ ಬರವಣಿಗೆ ಸಾರ್ಥಕವಾಗುತ್ತದೆ ಧನ್ಯವಾದಗಳು ಸರ್

      Delete
  10. ಉಪಯುಕ್ತ ಲೇಖನ ಸರ್, ಧನ್ಯವಾದಗಳು

    ReplyDelete
  11. ಉತ್ತಮ ಮಾಹಿತಿ ಕೊಟ್ಟಿದಿರಿ ಸರ್.

    ReplyDelete

Featured Post

QUESTION PAPER ANALYSIS AND FRAMING QUESTIONS BASED ON VARIOUS OBJECTIVES

QUESTION PAPER ANALYSIS AND FRAMING QUESTIONS BASED ON VARIOUS OBJECTIVES  Section A: 1-Mark Questions (Easy) The S.I. Unit of potential dif...