new tab editing

SCROLING TEXT

ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಮನವಿ:ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. 1) ಕಡ್ಡಾಯವಾಗಿ ಮಾಸ್ಕ್ ಧರಿಸಿ. 2) ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ. 3) ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ. 4) ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5) ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6) ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ. 7) ಪ್ರತಿದಿನ ಮಾಸ್ಕ್ ಬಳಸಿದ ನಂತರ ಬಿಸಿನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ.PREVENTION IS BETTER THAN CURE . Attention : Get resources from menu-> Science > Pariksha kirana-22-23> .

Sunday, August 9, 2020

ಶಿಕ್ಷಣ ಕ್ಷೇತ್ರದ ನೂತನ ಮೈಲಿಗಲ್ಲು ಪರೀಕ್ಷಾವಾಣಿ blog date : 30-06-2020

 

ಶಿಕ್ಷಣ ಕ್ಷೇತ್ರದ ನೂತನ ಮೈಲಿಗಲ್ಲು ಪರೀಕ್ಷಾವಾಣಿ

 ಮಾನ್ಯ ಸಚಿವರ ಆದೇಶದಂತೆ ಏಪ್ರಿಲ್ ತಿಂಗಳ 29 ನೇ ತಾರೀಖಿನಿಂದ ಕನ್ನಡ ಮಾಧ್ಯಮದಲ್ಲಿ ಪ್ರಾರಂಭಗೊಂಡು 

ತದ ನಂತರ ಆಂಗ್ಲಮಾಧ್ಯಮದಲ್ಲಿ ಮೇ 9ರಂದು ಪ್ರಾರಂಭಗೊಂಡು SSLC ಪರೀಕ್ಷಾವಾಣಿಯು ಒಂದು ತಿಂಗಳ ಕಾಲ ಪರೀಕ್ಷೆ ಆರಂಭಗೊಳ್ಳುವವರೆಗೂ ಪುನರ್ಮನನ ತರಗತಿಗಳನ್ನು ಒದಗಿಸಲಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಲ್ಲೂ ಪುನರ್ಮನನ ತರಗತಿಗಳನ್ನು ಉಚಿತವಾಗಿ ಲಭ್ಯವಾಗಿಸುವಂತೆ ನೀಡಿ ಲಾಕ್ ಡೌನ್ ಅವಧಿಯಲ್ಲಿ ಹತಾಶೆಗೊಳಗಾದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಹೊಸ ಸಾಧ್ಯತೆಗಳ ಲೋಕವನ್ನೇ ತೆರೆದಿದೆ.

ಚಂದನವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಡಿ.ಎಸ್.ಇ.ಆರ್.ಟಿ ಪ್ರಾಯೋಜಿತ ಕಾರ್ಯಕ್ರಮವು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗೆ ಕೋವಿಡ್ -19 ನ ಕಗ್ಗತ್ತಲ ಲೋಕದಲ್ಲಿ ಮುಳುಗಿರುವ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಮೌನಕ್ರಾಂತಿಗೆ ಹೊಸಭಾಷ್ಯವನ್ನೇ  ಬರೆದಿದೆ. ಮಕ್ಕಳವಾಣಿ ಮತ್ತು ಪರೀಕ್ಷಾವಾಣಿಗಳೆರಡನ್ನೂ ಏಕಕಾಲದಲ್ಲಿ ಪ್ರಸಾರವಾಗುವಂತೆ ನೋಡಬೇಕಾಗಿದ್ದ ಅನಿವಾರ್ಯತೆಯಲ್ಲಿ, ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಎರಡು ದೋಣಿಗಳಲ್ಲಿ ಕಾಲಿಟ್ಟು ಎರಡನ್ನೂ ಅಷ್ಟೇ. ಆಸ್ಥೆಯಿಂದ ದಡ ಸೇರಿಸುವ ಸವಾಲಿನ ನಡುವೆ ಯಶೋ ಗಾಥೆಯೊಂದು ಮೂಡಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಮಾನ್ಯ ಪ್ರಧಾನ ಕಾರ್ಯದರ್ಶಿಯವರು, ಮಾನ್ಯ ಶಿಕ್ಷಣ ಆಯುಕ್ತರು ಹಾಗೂ ಮಾನ್ಯ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಡಿ.ಎಸ್.ಇ.ಆರ್.ಟಿಯ ಮಾನ್ಯ ನಿರ್ದೇಶಕರುಗಳ ಮಾರ್ಗದರ್ಶನದಲ್ಲಿ ಹಗಲಿರುಳು ಕಾರ್ಯನಿರ್ವಹಿಸಿದ ತಂತ್ರಜ್ಞರು, ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳೆಲ್ಲರ ಸಮರ್ಪಣಾ ಮನೋಭಾವದಿಂದ ಪರೀಕ್ಷಾವಾಣಿ ಎಂಬ ಕನಸು ನನಸಾಗಿದೆ.

     ಮೊದಲಿಗೆ ಗಣಿತ, ವಿಜ್ಞಾನಗಳೊಂದಿಗೆ ಕನ್ನಡ ಮಾಧ್ಯಮದಲ್ಲಿ ಆರಂಭಗೊಂಡು ಪುನರ್ಮನನ ತರಗತಿಗಳು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅಪಾರ ನಿರೀಕ್ಷೆಗಳನ್ನು ಹುಟ್ಟು ಹಾಕಿತು.  ವಿದ್ಯಾರ್ಥಿಗಳು ಮತ್ತು ಪೋಷಕರ ಒತ್ತಾಸೆಯಂತೆ ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್‌ರವರ ನಿರ್ದೇಶನದಂತೆ ಆಂಗ್ಲ ಮಾಧ್ಯಮದಲ್ಲೂ ಮೇ ತಿಂಗಳ 9ನೇ ತಾರೀಖಿನ ಪೂರ್ವಾಹ್ನ 9:30 ರಿಂದ ಪರೀಕ್ಷಾವಾಣಿಯ ತರಗತಿಗಳು ಪ್ರಾರಂಭಗೊಂವು. ಗಣಿತ ವಿಜ್ಞಾನಗಳಲ್ಲದೇ ಸಮಾಜ, ಪ್ರಥಮಭಾಷೆ, ದ್ವಿತೀಯಭಾಷೆ ಹಾಗೂ ತೃತೀಯ ಭಾಷೆಗಳಲ್ಲೂ ಕಾರ್ಯಕ್ರಮ ಸಿದ್ಧಗೊಂಡಿದೆ. ಪ್ರತೀಪಾಠಗಳ ಪುನರ್ಮನನ ತರಗತಿಗಳ ಜೊತೆಗೆ ವಿಜ್ಞಾನದ ಪ್ರಯೋಗಗಳ ಮೂಲಕ ಸರಳವಾಗಿ ಪರಿಕಲ್ಪನೆಯನ್ನು ಅರ್ಥೈಸಲಾಗುತ್ತಿದೆ. ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಯಾವ ಪ್ರಶ್ನೆಗಳಿಗೆ ಹೇಗೆ ಮತ್ತು ಯಾವ ರೀತಿಯಲ್ಲಿ ಎಷ್ಟು ಉತ್ತರ ಬರೆಯಬೇಕು, ಸಮಯಪಾಲನೆ, ಉನ್ನತ               ಲೋಚನಾ ಕೌಶಲವುಳ್ಳ ಪ್ರಶ್ನೆಗಳನ್ನು ವಿಶ್ಲೇಷಿಸಿ ಉತ್ತರಿಸುವ ಕೌಶಲಗಳು, ಬದಲಾದ ಪರೀಕ್ಷಾ ವಿಧಾನ ಮೊದಲಾದ ಮಾಹಿತಿಗಳನ್ನು ತಜ್ಞ ಅನುಭವಿ ಶಿಕ್ಷಕರು ಎಲ್ಲಾ ವಿಷಯಗಳಲ್ಲೂ ಮಾರ್ಗದರ್ಶನ ನೀಡಲಿದ್ದಾರೆ.

 ದೂರದರ್ಶನದ ಚಂದನ ವಾಹಿನಿಯಲ್ಲಿ ಕನ್ನಡ ಮಾಧ್ಯಮದ ತರಗತಿಗಳು ಪ್ರತಿದಿನವೂ ಮಧ್ಯಾಹ್ನ 3 ರಿಂದ 4:30ರವರೆಗೆ ಪ್ರಸಾರಗೊಳ್ಳುತ್ತಿವೆ. ಅಲ್ಲದೆ ಮರುದಿನ ಬೆಳಗ್ಗೆ 6 ರಿಂದ 7:30 ರವರೆಗೆ ಮರುಪ್ರಸಾರಗೊಂಡರೆ, ಆಂಗ್ಲ ಮಾಧ್ಯಮದ ತರಗತಿಗಳು ಬೆಳಗ್ಗೆ 9:30 ರಿಂದ 11:00 ರವರೆಗೆ ಪ್ರಸಾರಗೊಳ್ಳುತ್ತಿವೆ. ಈ ತರಗತಿಗಳ ಮರುಪ್ರಸಾರವು ಅದೇ ದಿನ ರಾತ್ರಿ 11:00 ರಿಂದ 12:30 ರವರೆಗೆ ನಡೆಯುತ್ತಿದ್ದು ಲಕ್ಷಾಂತರ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಇದಲ್ಲದೆ ಡಿ.ಎಸ್.ಇ.ಆರ್.ಟಿ.ಯ ಯೂ-ಟ್ಯೂಬ್ ಚಾನಲ್ ಜ್ಞಾನದೀಪ, ಮಕ್ಕಳವಾಣಿ ಹಾಗೂ ಚಂದನವಾಹಿನಿಯ ಯೂ–ಟ್ಯೂಬ್ ಚಾನಲ್‌ಗಳಲ್ಲೂ ಈ ಪಾಠಗಳು ವೀಕ್ಷಣೆಗೆ ಲಭ್ಯವಿದ್ದು 3 ಲಕ್ಷಕ್ಕೂ ಹೆಚ್ಚಿನ ಪ್ರೇಕ್ಷಕರಿಂದ ವೀಕ್ಷಣೆಗೊಳಗಾಗಿ ಅಪಾರ ಜನಮನ್ನಣೆಗೆ ಪಾತ್ರವಾಗಿವೆ.  

     ಈ ಕಾರ್ಯಕ್ರಮವನ್ನು ತರಾತುರಿಯಲ್ಲಿ ಮಾಡಬೇಕಾಗಿ ಬಂದಾಗ ಎದುರಿಗಿದ್ದ ಅಡೆತಡೆಗಳು ನೂರಾರು. ಲಾಕ್ಡೌನ್ ಸಂದರ್ಭದಲ್ಲಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳನ್ನು ಕಲೆಹಾಕುವುದು, ತರಗತಿಗೆ ಬೇಕಾದ ಪವರ್ ಪಾಯಿಂಟ್ ತಯಾರಿಕೆ, ಸಂಪನ್ಮೂಲ ವ್ಯಕ್ತಿಗಳಿಗೆ ಮಾರ್ಗದರ್ಶನ, ರೆಕಾರ್ಡಿಂಗ್, ಎಡಿಟಿಂಗ್, ತಾಂತ್ರಿಕ ಸಹಕಾರ ಇತ್ಯಾದಿಗಳನ್ನು ಸಮರ್ಪಕವಾಗಿ ಪರೀಕ್ಷಾವಾಣಿಗೆ ಒದಗಿಸುವುದರ ಜೊತೆಗೆ ಮತ್ತೊಂದು ಕೂಸಾದ ಮಕ್ಕಳವಾಣಿಗೂ   ಒದಗಿಸಬೇಕಾಗಿತ್ತು. ಮಾನ್ಯ ರಾಜ್ಯಯೋಜನಾ ನಿರ್ದೇಶಕರು ಹಾಗೂ ಡಿ.ಎಸ್.ಇ.ಆರ್.ಟಿ.ಯ ನಿರ್ದೇಶಕರ ಸಲಹೆ ಸೂಚನೆಗಳ ಅನ್ವಯ ಕಾರ್ಯ ಪ್ರಾರಂಭಗೊಂಡಿತು. ಪ್ರತಿಯೊಂದು ಹಂತದಲ್ಲೂ ಮಾನ್ಯ ನಿರ್ದೇಶಕರು ಸ್ವತಃ ಪಾಠ ಸಿದ್ಧತೆಗಳನ್ನು ಪರಿಶೀಲಿಸಿ  ಸಂಪನ್ಮೂಲ ವ್ಯಕ್ತಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿ ರೆಕಾರ್ಡಿಂಗ್ ಮಾಡಲು ಅನುಮತಿಸುತ್ತಿದ್ದರು. ಅಷ್ಟೇ ಅಲ್ಲದೇ ನಿರ್ದೇಶಕರು  ಪ್ರತಿಯೊಂದು ತರಗತಿಯ ಪ್ರಸಾರವನ್ನು ವೈಯಕ್ತಿಕವಾಗಿ ತಾವೇ ಸ್ವತಃವೀಕ್ಷಿಸಿ ಮುಂದಿನ ದಿನದ ರೆಕಾರ್ಡಿಂಗ್ ವೇಳೆ ಅಗತ್ಯ  ಬದಲಾವಣೆಗಳನ್ನು ಸೂಚಿಸಿ ಕಾರ್ಯಕ್ರಮದ ಉತ್ಕೃಷ್ಟತೆಯನ್ನು ಹೆಚ್ಚಿಸಲು ಕಾರಣರಾದರು. 

 ಬೆಳಿಗ್ಗೆ 7 ಗಂಟೆಗೆ ಆರಂಭಗೊಳ್ಳುತ್ತಿದ್ದ ವಿಡಿಯೋ ಶೂಟಿಂಗ್ ಮತ್ತು ಎಡಿಟಿಂಗ್ ಕಾರ್ಯಗಳು ರಾತ್ರಿ 8 ರಿಂದ 9 ಗಂಟೆಯವರೆಗೂ ನಡೆದದ್ದಿದೆ. ಕರೋನ ಪೀಡೆಯ ಹಿನ್ನಲೆಯಲ್ಲಿ ಲಾಕ್ಡೌನ್, ಸಿಲ್ಡೌನ್ ಗಳ ನಡುವೆ ಭಯ –ಆತಂಕಗಳು ಕೆಲಸ ಮಾಡುವವರನ್ನು ಕಾಡಿದ್ದಿದೆ. ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸುರಕ್ಷಾ ಕ್ರಮಗಳನ್ನು ಏರ್ಪಡಿಸಿಕೊಂಡು ಡಿ.ಎಸ್.ಇ.ಆರ್.ಟಿ.ಯಲ್ಲೇ ರಾತ್ರಿ ಉಳಿದು ಬೆಳ್ಳಂಬೆಳಗ್ಗೆ ಕಾರ್ಯನಿರ್ವಹಿಸಿದ್ದಿದೆ. ಪರಸ್ಪರ ಸಂಪನ್ಮೂಲಗಳನ್ನು ಹಂಚಿಕೊಂಡು  ಪರಾಮರ್ಶಿಸಿ, ಚರ್ಚಿಸಿ, ಕ್ಯಾಮರದ ಮುಂದೆ ನಿಂತದ್ದಿದೆ. ಊಟೋಪಚಾರಗಳ ಸಮಸ್ಯೆ ಎದುರಾದಾಗ ಸಮೀಪದಲ್ಲೇ ಮನೆಯಿದ್ದ ಸ್ನೇಹಿತರು ಕಾಫಿ-ತಿಂಡಿ ವ್ಯವಸ್ಥೆ ಮಾಡಿ ಅನ್ನದಾತರಾಗಿದ್ದಾರೆ. ಇಂತಹ ಸ್ನೇಹಿತರನ್ನು ಮರೆಯುವುದುಂಟೇ? 

ಹೀಗೆ ಅಹರ್ನಿಶಿ ಯುದ್ಧದೋಪಾದಿಯಲ್ಲಿ ಸಂಘಟಿತ ಕಾರ್ಯದಿಂದಾಗಿ ಉತ್ತಮ ಕಾರ್ಯಕ್ರಮವೊಂದು ರೂಪಿತವಾಯಿತು.


 ಚಾತಕಪಕ್ಷಿಗಳಂತೆ ಕಾಯುತ್ತಿರುವ ವಿದ್ಯಾರ್ಥಿಗಳ ಉತ್ತಮ ಪ್ರತಿಸ್ಪಂದನೆಯಿಂದಾಗಿ ಕಠಿಣ ಪರಿಸ್ಥಿತಿಯಲ್ಲಿ ನಡೆಸಿದ ಶ್ರಮ ಸಾರ್ಥಕವಾಗಿದೆ. ಎಲ್ಲರ ಮೊಗದಲ್ಲೂ ಧನ್ಯತೆಯ ಭಾವ, ಸಾಧನೆಯ ಸಂತಸ ಹೊನಲಾಗಿ ಹರಿದಿದೆ. ಮೊಬೈಲ್ ಸಂದೇಶ ಮತ್ತು ಕರೆಗಳ ಮೂಲಕ ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ. ವಾಟ್ಸಾಪ್ ಗ್ರೂಪ್‌ಗಳಲ್ಲಿ ಧನಾತ್ಮಕ ಚರ್ಚೆಗಳು ನಡೆಯುತ್ತಿವೆ.


 ದಿನೇ ದಿನೇ ಪರೀಕ್ಷಾವಾಣಿಯನ್ನು ದೂರದರ್ಶನ ಮತ್ತು ಯೂಟ್ಯೂಬ್ ಮೂಲಕ ವೀಕ್ಷಿಸುವವರ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ. ಕರೋನಾ ಕಾರ್ಮೋಡದ ಆತಂಕದಿಂದ ಹೊರಬಂದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿಶಾಲೆಗಳ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದಲೇ ಪರೀಕ್ಷಾ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ಬರೆಯಲಿರುವ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ ಮಕ್ಕಳೂ ಕಾರ್ಯಕ್ರಮ ವೀಕ್ಷಿಸುತ್ತಿರುವುದು ಚೇತೋಹಾರಿಯಾಗಿದೆ. ಶಿಕ್ಷಣ ಇಲಾಖೆಯ ಈ ನೂತನ ಉಪಕ್ರಮವು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಡೆಯಲಿರುವ ಭವಿಷ್ಯದ ಬದಲಾವಣೆಗಳಿಗೆ ದಿಕ್ಸೂಚಿಯಾಗಲಿದೆ.




ಲೇಖಕರ ಪರಿಚಯ

ಶ್ರೀ ರಾಮಚಂದ್ರ ಭಟ್ ಬಿ.ಜಿ.

ಪರೀಕ್ಷಾವಾಣಿಯ ಸಂಪನ್ಮೂಲ ವ್ಯಕ್ತಿಗಳು ಹಾಗೂ

NCERT 8-10ನೇ ತರಗತಿಗಳ ವಿಜ್ಞಾನ ಪಠ್ಯಪುಸ್ತಕ ಭಾಷಾಂತರ ಸಮಿತಿಯ ಪರಿಶೀಲಕರು

ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಬ್ಯಾಟರಾಯನಪುರ

ಮೈಸೂರು ರಸ್ತೆ, ಬೆಂಗಳೂರು-26

ಮೊಬೈಲ್ ಸಂಖ್ಯೆ : 7892163470

 

bgramachandra1974@gmail.com



No comments:

Post a Comment

Featured Post

2024-25 Model paper link

  https://notebooklm.google.com/?_gl=1*6lm8lw*_ga*NDY2Nzc3MDguMTczNjMzMzA5Mw..*_ga_W0LDH41ZCB*MTczNjMzMzA5Mi4xLjEuMTczNjMzMzA5Mi42MC4wLjA....